ವ್ಯಕ್ತಿಚಿತ್ರ
	ಚಿತ್ರಕಲೆಯ ಒಂದು ವಿಭಾಗ. ವ್ಯಕ್ತಿಯಿದ್ದಂತೆ ಚಿತ್ರದಲ್ಲಿ ಮೂಡಿಸುವುದು ವ್ಯಕ್ತಿಚಿತ್ರವೆನಿಸಿಕೊಳ್ಳುತ್ತದೆ (ಪೋಟ್ರೆಟ್). ವರ್ಣಸಂ ಯೋಜನೆ, ಯಥಾರ್ಥ ವಿವರಗ್ರಹಣ, ಸಹಜ ನಿರೂಪಣೆ ಇವು ಇಲ್ಲಿ ಇರಬೇಕಾದ ಮುಖ್ಯ ಅಂಶಗಳು. ಈ ಕಾಲದಲ್ಲಿ ಫೋಟೋಗ್ರಫಿ ಮಾಡುತ್ತಿರುವ ಕೆಲಸವನ್ನು ಹಿಂದಿನ ಕಾಲದಲ್ಲಿ ಕಲಾವಿದರು ಮಾಡುತ್ತಿದ್ದರು. ಶ್ರೀಮಂತರು, ರಾಜರು, ಅಧಿಕಾರಿಗಳು ತಮ್ಮತಮ್ಮ ಭಾವಚಿತ್ರಗಳನ್ನು ಬರೆಯಿಸಿ, ಅವು ಬಹು ಕಾಲ ಉಳಿಯುವ ಪ್ರಯತ್ನ ಮಾಡುತ್ತಿದ್ದರು. ಈ ದೃಷ್ಟಿಯಿಂದ ಅವರು ಪರಿವಾರದಲ್ಲಿ ಕಲಾವಿದರನ್ನು ಸೇರಿಸಿಕೊಂಡಿರುತ್ತಿದ್ದರು.

	ವ್ಯಕ್ತಿಯ ಪ್ರತಿಕೃತಿಯನ್ನು ಸಹಜವಾಗಿ ಚಿತ್ರಿಸುವ ಪದ್ಧತಿ ತುಂಬ ಪ್ರಾಚೀನವಾದುದು. ಈಜಿಪ್ಟ್, ಅಸ್ಸೀರಿಯ ದೇಶಗಳಲ್ಲಿಯೂ ಇದರ ಪರಿಪಾಠವಿತ್ತು. ಗ್ರೀಸ್, ರೋಮ್ ದೇಶಗಳಲ್ಲಿಯೂ ಈ ಕಲೆ ಸಂಪನ್ನವಾಗಿ ಬೆಳೆದು ಬಂತು. ಕ್ರೈಸ್ತಧರ್ಮದ ಪ್ರಭಾವ ಕಲಾಪ್ರಪಂಚದ ಮೇಲೆ ಬೀಳತೊಡಗಿದಂದಿನಿಂದ ಲೌಕಿಕ ವ್ಯಕ್ತಿ ವಿಷಯಗಳಲ್ಲಿ ಕಲಾವಿದರ ಆಸಕ್ತಿ ಕುಗ್ಗಿ ಧಾರ್ಮಿಕ, ಪೌರಾಣಿಕ, ಸಾಂಕೇತಿಕ ವಸ್ತು ವಿಷಯಗಳು ಕಲೆಯ ಭಾವಾಭಿವ್ಯಕ್ತಿಗೆ ಪಾತ್ರವಾದುವು. ಶರೀರದ ವಿವರಗಳ ಚಿತ್ರಣ ಗಂಭೀರವಲ್ಲವೆಂದೂ ಅಂತರಾತ್ಮದ ಸೌಂದರ್ಯ ಮಾತ್ರ ವ್ಯಕ್ತಿಚಿತ್ರ ಅನುಸಂಧಾನಮಾಡಬೇಕೆಂದೂ ನಂಬಿಕೆಯಿತ್ತು. ಸಹಜವಾಗಿಯೇ ಐರೋಪ್ಯದೇಶಗಳಲ್ಲಿ ವ್ಯಕ್ತಿಚಿತ್ರ ಕಲೆ ಹಿಂದುಳಿಯಿತು.

	ಹದಿನೈದನೆಯ ಶತಮಾನದಿಂದ ಈಚೆಗೆ ಲೌಕಿಕ ವ್ಯಕ್ತಿವಿಷಯಗಳಲ್ಲಿ ಪುನಃ ಆಸಕ್ತಿ ಬೆಳೆದು ಕಲೆಯ ಪುನರುಜ್ಜೀವನ ಉಂಟಾಯಿತು. ಇಟಲಿ ಮತ್ತು ಫ್ಲಾರೆನ್ಸ್ ದೇಶಗಳಲ್ಲಿ ವ್ಯಕ್ತಿಚಿತ್ರ ವಿಶೇಷವಾಗಿ ಬೆಳೆಯಿತು. ಹೀಗೆ ಬೆಳೆದ ಕಲೆಯಲ್ಲಿ ಸಾಧಾರಣವಾಗಿ ನೈಜ ಚಿತ್ರಣವೇ ಮುಖ್ಯೋದ್ದೇಶವಾಗಿತ್ತು. ವ್ಯಕ್ತಿಯನ್ನು ಯಥಾವತ್ತಾಗಿ, ಚಾಚೂ ತಪ್ಪದೆ ಚಿತ್ರಿಸಬೇಕೆಂಬ ಆಶಯ ಕಲಾವಿದರಿಗಿತ್ತು. ವ್ಯಕ್ತಿಚಿತ್ರದಲ್ಲಿ ವ್ಯಕ್ತಿಯ ಶಿರೋಭಾಗ, ವಕ್ಷಸ್ಥಳ, ಉಡುಗೆ-ತೊಡುಗೆಗಳ ವಿವರಗಳು, ಅಲಂಕರಣ ವಿಧಾನಗಳು, ಮುಖಭಾವ ಎಲ್ಲವನ್ನೂ ಯಥಾರ್ಥವಾಗಿ ಮೂಡಿಸುತ್ತಿ ದ್ದರು. ಇಲ್ಲದ ಸೊಗಸನ್ನು ತುಂಬಿಸುವ ಪ್ರಯತ್ನ ಕಾಣಬರುತ್ತಿರಲಿಲ್ಲ. ಚಿತ್ರವನ್ನು ನೋಡಿದೊಡನೆ ವ್ಯಕ್ತಿಯನ್ನೇ ನೋಡಿದಂತೆ ಭಾಸವಾದರೆ ಕಲಾವಿದನ ಶ್ರಮ ಸಾರ್ಥಕವೆಂಬ ಭಾವನೆಯಿತ್ತು. ವ್ಯಕ್ತಿಚಿತ್ರಣದಲ್ಲಿ ಕಲಾವಿದನಿಗೆ ತನ್ನ ಕಲ್ಪನೆಗಳನ್ನು ಅಭಿವ್ಯಕ್ತಿಗೊಳಿಸುವ ಸ್ವಾತಂತ್ರ್ಯವಿರುವು ದಿಲ್ಲ ಎಂಬ ಕಾರಣಕ್ಕಾಗಿ ಉತ್ತಮ ಕಲಾವಿದನಿಗೆ ವ್ಯಕ್ತಿಚಿತ್ರಣ ತಕ್ಕದಲ್ಲ ವೆಂಬ ವಾದವೂ ಇತ್ತು. ಪ್ರತಿಕೃತಿಯಾದರೂ ಭಾವದ ಅಭಿವ್ಯಕ್ತಿಯಲ್ಲಿ ಕಲೆಗಾರನ ಪ್ರತಿಭೆ ವ್ಯಕ್ತವಾಗುವುದೆಂಬ ಕಾರಣದಿಂದ ಉತ್ತಮ ಕಲಾವಿದರೂ ವ್ಯಕ್ತಿಚಿತ್ರಣಕ್ಕೆ ಕೈಹಾಕಿದರು. ವೆನಿಸ್ ನಗರದ ಕಲಾವಿದರ ಕೈಯಲ್ಲಿ ಈ ಕಲೆ ಪ್ರೌಢವಾಗಿ ಬೆಳೆಯಿತು. ಕೆಲವೊಮ್ಮೆ ಕಲಾವಿದರು ಧಾರ್ಮಿಕ ಚಿತ್ರಗಳನ್ನು ಬಿಡಿಸುವ ಸಂದರ್ಭದಲ್ಲೂ ಆಶ್ರಯದಾತನಾದ ಶ್ರೀಮಂತನನ್ನೇ ಚಿತ್ರದ ಯಾವುದಾದರೊಂದು ಪಾತ್ರದಲ್ಲಿ ಚಿತ್ರಿಸುತ್ತಿದ್ದರು. ಹೀಗೆ ಕ್ರಿಸ್ತನ, ಅವನ ತಾಯಿ ಮೇರಿಯ ಚಿತ್ರ ಬರೆದಾಗ ಅಲ್ಲಿಯ ಕ್ರಿಸ್ತನೂ ಮೇರಿಯೂ ಶುದ್ಧಾಂಗವಾಗಿ ವ್ಯಕ್ತಿಚಿತ್ರಗಳೇ ಆಗಿರುತ್ತಿದ್ದುವು. ಹದಿನೈದನೆಯ ಶತಮಾನದ ಫ್ಲೆಮಿಷ್ ವರ್ತಕರು ಅಪಾರ ಧನಗಳಿಸಿ ಕಲಾವಿದರನ್ನು ನಿಯಮಿಸಿಕೊಂಡು ಹೀಗೆ ಐತಿಹಾಸಿಕ ಧಾರ್ಮಿಕ ಪ್ರಸಂಗ ನಿರೂಪಣೆಗಳಲ್ಲಿ ತಮ್ಮನ್ನು ಚಿತ್ರಿಸುವಂತೆ ನಿರ್ದೇಶಿಸುತ್ತಿದ್ದರು. ಬ್ರಸೆಲ್ಸ್‍ನ ನಗರ ಭವನದಲ್ಲಿ ರೋಜಿಯರ್ ಪಾನ್ ಡೆರ್ ವೇಯ್‍ಡೆನ್ ಎಂಬ ಪ್ರಖ್ಯಾತ ಕಲಾವಿದ ಇಂಥ ಹಲವಾರು ವ್ಯಕ್ತಿಚಿತ್ರಗಳನ್ನು ನಿರ್ಮಿಸಿದ್ದ. ಉತ್ತರ ಯುರೋಪಿನಲ್ಲಿ ಲ್ಯೂಕಾಸ್ ಕ್ರಾನಾಖ್ ಮತ್ತು ಹಾನ್ಸ್ ಹೋಲ್‍ಬಿನ್ ಆ ಕಾಲದ ಹೆಸರಾಂತ ವ್ಯಕ್ತಿಚಿತ್ರಕಾರರಾಗಿದ್ದರು. ಈ ಕಲೆ ವೆನಿಸ್‍ನಲ್ಲಿ ಬೆಳೆಯತೊಡಗಿದಾಗ ಹೊಸದೊಂದು ವಿವರ ಸೇರಿಕೊಂಡಿತು. ಒಬ್ಬ ಶ್ರೀಮಂತನನ್ನು ಚಿತ್ರಿಸುವಾಗ ಅವನ ವ್ಯಕ್ತಿವಿವರಗ ಳೊಂದಿಗೆ ಅವನ ಶ್ರೀಮಂತಿಕೆಯ ವೈಭವವನ್ನೂ ಮೂಡಿಸಬೇಕೆಂಬ ಕಾತುರ ಕಲಾವಿದರಲ್ಲಿ ಕಾಣತೊಡಗಿತು. ತಾವು ಚಿತ್ರಿಸುವ ವ್ಯಕ್ತಿಯನ್ನು ಆದಷ್ಟೂ ವೈಭವೀಕರಿಸಿ ಮಹಾಪುರುಷನಂತೆ ಕಾಣಿಸುವ ಸಂಪ್ರದಾಯವನ್ನು ಆರಂಭಿಸಿದ ಕಲಾವಿದರಲ್ಲಿ ತುಂಬ ಪ್ರಸಿದ್ಧರಾದವರು ವೆನಿಸ್ ನಗರದ ಟಟ್ಯನ್ ಮತ್ತು ವಾನ್ ಡೈಕ್. ಇವರ ವ್ಯಕ್ತಿಚಿತ್ರಗಳಲ್ಲಿ ಈ ಸಂಪ್ರದಾಯದ ಪ್ರಭಾವ ಹೆಚ್ಚಾಗಿ ಮೂಡಿಬಂತು. ವ್ಯಕ್ತಿಚಿತ್ರಣ ನೈಜವಾಗಿ, ಯಥಾರ್ಥವಾಗಿರಬೇಕೆಂಬ ನಿಯಮ ಸಡಿಲಗೊಂಡಿತು.  ವಸ್ತುವಿನ ಹಿರಿಮೆಯನ್ನು ಪ್ರತಿಪಾದಿಸಲು ಓರೆಕೋರೆಗಳನ್ನು ನೆಟ್ಟಗೆ ಮಾಡಿ ಇಲ್ಲದ ಲಾವಣ್ಯವನ್ನು ಅಧ್ಯಾರೋಪ ಮಾಡಿಕೊಂಡ ವ್ಯಕ್ತಿಚಿತ್ರಗಳು ಬಂದುವು. ವ್ಯಕ್ತಿಯ ಸ್ವಾಭಿಮಾನ, ಅಪೇಕ್ಷೆಗಳನ್ನರಿತು ಅವುಗಳಂತೆ ಅವನ ಸ್ವರೂಪವನ್ನು ಮಾರ್ಪಡಿಸಲು ಕಲಾವಿದರ ಸಮ್ಮತಿಯಿತ್ತು. ಉತ್ಪ್ರೇಕ್ಷೆಯ ಮನೋಧರ್ಮವನ್ನು ತಿರಸ್ಕರಿಸಿ ನೈಜ ನಿರೂಪಣೆಯೇ ವ್ಯಕ್ತಿಚಿತ್ರದ ಜೀವಾಳವೆಂದು ಸಾಧಿಸಿದ ಕಲಾವಿದ ರೆಂಬ್ರಾಂಟ್ ಪ್ರಪಂಚಪ್ರಸಿದ್ಧನಾದ. ರೆಂಬ್ರಾಂಟ್‍ನದು ಅದ್ಭುತವಾದ ವ್ಯಕ್ತಿತ್ವ. ಇವನ ಜೀವನ ಒಂದು ನಾಟಕದಂತೆ ಸಾಗಿತು. ತನಗೆ ಹಿತವೆಂದು ತೋರಿದ ವ್ಯಕ್ತಿಗಳನ್ನೇ ಈತ ಚಿತ್ರಿಸುತ್ತಿದ್ದ. ಧನದಾಸೆಯಿಂದ ಶ್ರೀಮಂತರನ್ನು ಚಿತ್ರಿಸಲು ಈತ ಅಪೇಕ್ಷಿಸಲಿಲ್ಲ. ಸಾಮಾನ್ಯ ವ್ಯಕ್ತಿಗಳನ್ನೇ ತನ್ನ ಚಿತ್ರಗಳ ವಸ್ತುಗಳನ್ನಾಗಿ ಆರಿಸಿಕೊಂಡ. ಅದರಲ್ಲೂ ವೃದ್ಧರನ್ನು ಚಿತ್ರಿಸಲು ಅಪೇಕ್ಷಿಸುತ್ತಿದ್ದ. ಇವನ ಮನೋಧರ್ಮದಿಂದಲೇ ವ್ಯಕ್ತಿಚಿತ್ರಗಳನ್ನು ರಚಿಸಿದ ಇನ್ನೊಬ್ಬ ಕಲೆಗಾರ ವೆಲಾಜೆಕ್ವೆ. ಈತ ಸ್ಪೇನ್ ದೊರೆಯ ಆಸ್ಥಾನದಲ್ಲಿದ್ದನಾದರೂ ರಾಜಪರಿವಾರಕ್ಕೆ ಸಹಜವಾದ ಭಟ್ಟಂಗಿತನ ಇವನ ಸ್ವಭಾವದಲ್ಲಿರಲಿಲ್ಲ. ಕಲೆಯಲ್ಲಿ ಎಲ್ಲರಂತೆಯೇ ರಾಜನನ್ನೂ ಕಾಣಿಸಲು ಈತ ಅಳುಕಲಿಲ್ಲ. ಆಯಾ ವ್ಯಕ್ತಿಗಳ ಭಂಗಿ, ಭಾವ, ವಿವರಗಳನ್ನು ಯಥಾರ್ಥವಾಗಿ, ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ರೂಪಿಸುತ್ತಿದ್ದ. ಇವನ ಈ ಧೈರ್ಯ ಗೋಯಾ (1746-1828) ಎಂಬ ಚಿತ್ರಕಾರನಲ್ಲಿ ಇನ್ನೂ ಸ್ಪಷ್ಟವಾಗಿತ್ತು.  ಬೇಕೆಂದೇ ಶ್ರೀಮಂತರನ್ನೂ ರಾಜರನ್ನೂ ಹಾಸ್ಯಾಸ್ಪದವಾಗಿ ಚಿತ್ರಿಸಲಾರಂಭಿಸಿದ. ಇವನು ಅತ್ಯಂತ ಪ್ರತಿಭಾವಂತ ಕಲಾವಿದನಾಗಿದ್ದ.

	ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡ್ ದೇಶದ ಕಲಾವಿದ ಜೊಹುವಾ ರೆನಾಲ್ಡ್ಸ್ ಪ್ರಪಂಚಪ್ರಸಿದ್ಧ ವ್ಯಕ್ತಿಚಿತ್ರಗಳನ್ನು ರಚಿಸಿದ್ದಾನೆ. ಇವನಿಗೆ ಶ್ರೀಮಂತರ ಸಹವಾಸಕ್ಕಿಂತ ಸುಸಂಸ್ಕøತ ಜನರ ಸಹವಾಸ ಹೆಚ್ಚಿದ್ದುದರಿಂದ ಇಂಥ ಸುಸಂಪನ್ನ ವ್ಯಕ್ತಿಗಳೇ ಇವನ ಚಿತ್ರಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವನ ಚಿತ್ರಗಳಲ್ಲಿ ವಿವರಗಳು ನೈಜವಾಗಿದ್ದರೂ ಸಂದರ್ಭ ನಿರೂಪಣೆಯಲ್ಲಿ ಕಲ್ಪನೆಯಿದೆ. ಕಾಲ್ಪನಿಕ ಸನ್ನಿವೇಶಗಳಲ್ಲಿ ಸ್ತ್ರೀಪುರುಷರನ್ನು ಚಿತ್ರಿಸುವುದೆಂದರೆ ಈತನಿಗೆ ಬಲು ಪ್ರೀತಿ. ಇವನಂತೆಯೇ ಇಂಗ್ಲೆಂಡ್‍ನಲ್ಲಿ ವ್ಯಕ್ತಿಚಿತ್ರಣವನ್ನು ಬೆಳೆಸಿದ ಇನ್ನೊಬ್ಬ ಮಹಾನ್ ಕಲಾವಿದ ಗೇನ್ಸಬರೋ. ಇವನ ಪೆರ್ದಿತಾ ಎಂಬಾಕೆಯ ವ್ಯಕ್ತಿಚಿತ್ರ ಪ್ರಪಂಚದ ಉತ್ತಮ ಕಲಾಕೃತಿಗಳಲ್ಲೊಂದೆಂದು ಹೆಸರಾಗಿದೆ. ಮುಂದಿನ ತಲೆಮಾರಿನಲ್ಲಿ ಬಂದ ಲಾರೆನ್ಸ್, ಆ ಮುಂದಿನ ತಲೆಮಾರಿನಲ್ಲಿ ಬಂದ ಆಗಸ್ಟಸ್‍ಜಾನ್ ಮೊದಲಾದವರು ವ್ಯಕ್ತಿಚಿತ್ರಣದ ವೈಶಿಷ್ಟ್ಯವನ್ನು ಎತ್ತಿ ಹಿಡಿದಿದ್ದಾರೆ.

	ಭಾರತದಲ್ಲಿ ಚಿತ್ರಕಲೆಯ ವೈಶಿಷ್ಟ್ಯವನ್ನು ಅಜಂತ, ಎಲ್ಲೋರದಲ್ಲಿರುವ ಗುಹಾಂತರ  ದೇವಾಲಯಗಳಲ್ಲಿ ಗುರುತಿಸಬಹುದಾಗಿದ್ದು ವ್ಯಕ್ತಿಚಿತ್ರಣ ಕೂಡ ಅಲ್ಲಿ ಕಂಡುಬರುತ್ತದೆ. ಅಜಂತ ದೇವಾಲಯದಲ್ಲಿ ಚಳುಕ್ಯದೊರೆ ಪುಲಕೇಶಿಯ, ರಾಯಭಾರಿಯ ವ್ಯಕ್ತಿಚಿತ್ರ ನೈಜವಾಗಿ ಮೂಡಿಬಂದಿದೆ. ಲೇಪಾಕ್ಷಿಯ ವೀರಭದ್ರ ದೇವಾಲಯದಲ್ಲಿ ದೇವಾಲಯವನ್ನು ಕಟ್ಟಿಸಿದ  ವೀರಣ್ಣ-ವಿರೂಪಣ್ಣ ಇವರ ಚಿತ್ರಗಳನ್ನು ವರ್ಣಗಳಲ್ಲಿ ಮೂಡಿಸಲಾಗಿದೆ. ವಿಜಯನಗರದ ವಿರೂಪಾಕ್ಷ ದೇವಾಲಯದಲ್ಲಿ ವಿದ್ಯಾರಣ್ಯರು ಪಲ್ಲಕ್ಕಿಯನ್ನೇರಿ ಬಿಜಯಮಾಡುತ್ತಿರುವ ದೃಶ್ಯದ ವರ್ಣಚಿತ್ರವಿದೆ.

	ವ್ಯಕ್ತಿಚಿತ್ರಣಕ್ಕೆ ವಿಶೇಷವಾದ ಪುರಸ್ಕಾರ ದೊರೆತದ್ದು ಮೊಗಲರ ಕಾಲದಲ್ಲಿ. ನೂರಾರು ದೊರೆಗಳ, ಸಾಮಂತರ, ಅಧಿಕಾರಿಗಳ, ಸ್ತ್ರೀ ಪುರುಷರ ವ್ಯಕ್ತಿಚಿತ್ರಗಳು ಈ ಕಾಲದಲ್ಲಿ ಮೂಡಿಬಂದುವು. ಇದೇ ಜಾಡನ್ನು ಹಿಡಿದು ಹಿಂದುರಾಜರೂ ವ್ಯಕ್ತಿಚಿತ್ರಕಾರರಿಗೆ ಪ್ರೋತ್ಸಾಹವಿತ್ತರು. ಗೋಲ್ಕೊಂಡದ ಅರಸರ ಚಿತ್ರಗಳಲ್ಲಿ ಜಂಷೇದ್ ಕುತುಬ್‍ಷಾ, ಕುಲೀಕುತುಬ್‍ಷಾ, ಅಬ್ದಲ್‍ಹಸನ್‍ತಾನಾಷಾ ಮೊದಲಾದವರ ಚಿತ್ರಗಳು ಉತ್ತಮ ಕಲಾಕೃತಿಗಳಾಗಿವೆ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜರು, ದಿವಾನರು, ಅಧಿಕಾರಿಗಳು, ಜಗದ್ಗುರುಗಳು, ಸೇನಾಪತಿಗಳು ಮುಂತಾದವರ ನೂರಾರು ವ್ಯಕ್ತಿಚಿತ್ರಗಳು ಇವೆ. ಶ್ರೀರಂಗಪಟ್ಟಣದ ದರಿಯಾದವಲತ್ ಭಿತ್ತಿಚಿತ್ರದಲ್ಲಿ ಟಿಪ್ಪುಸುಲ್ತಾನ್, ಮದಕರಿನಾಯಕ, ಕೆಳದಿ ನಾಯಕ, ಕೊಡಗಿನ ಅರಸು, ರಾಣಿ ಚನ್ನಮ್ಮಾಜಿ ಮೊದಲಾದವರ ವ್ಯಕ್ತಿಚಿತ್ರಗಳು ಸುಂದರವಾಗಿವೆ. ರವಿವರ್ಮ 2  ಅನೇಕ ಪ್ರಸಿದ್ಧ ಪುರುಷರ ವ್ಯಕ್ತಿಚಿತ್ರಗಳನ್ನು ರಚಿಸಿದ್ದಾನೆ. ತಿರುವಾಂಕೂರು ಅರಸರ, ಪುದುಕ್ಕೋಟೆ ರಾಜರ ಚಿತ್ರಗಳೂ ದಕ್ಷಿಣದೇಶದ ವ್ಯಕ್ತಿಚಿತ್ರಣಕ್ಕೆ ಉತ್ತಮ ನಿದರ್ಶನಗಳಾಗಿವೆ. ಕರ್ನಾಟಕದಲ್ಲಿ ಕಲಾವಿದರಾದ ಕೆ.ವೆಂಕಟಪ್ಪ, ಕೇಶವಯ್ಯ, ಆರ್.ಎಸ್.ನಾಯ್ಡು, ಎಸ್.ಎನ್. ಸುಬ್ಬುಕೃಷ್ಣ, ಕೆ.ಕೆ. ಹೆಬ್ಬಾರ್ ಮೊದಲಾದವರು ರಚಿಸಿದ ವ್ಯಕ್ತಿಚಿತ್ರಗಳು ಪ್ರಸಿದ್ಧವಾಗಿವೆ.								
		(ಎಸ್.ಕೆ.ಆರ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ